Heart Attack symptoms: ಹಾರ್ಟ್ ಅಟ್ಯಾಕ್‌ಗೂ ಒಂದು ತಿಂಗಳ ಮುನ್ನ ದೇಹ ನೀಡುವ ಎಚ್ಚರಿಕೆ ಸಂಕೇತಗಳು
ಬೆಂಗಳೂರು: ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂಬ ನಂಬಿಕೆ ಸಂಪೂರ್ಣ ಸುಳ್ಳು. ಅನೇಕ ಸಂದರ್ಭಗಳಲ್ಲಿ ಅಟ್ಯಾಕ್ ಆಗುವುದಕ್ಕೂ ಒಂದು ತಿಂಗಳು ಮುಂಚಿತವಾಗಿಯೇ ದೇಹವು ಕೆಲವು ಸ್ಪಷ್ಟ ಸಂಕೇತಗಳನ್ನು ನೀಡುತ್ತದೆ.
ಇವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ವೈದ್ಯರನ್ನು ಸಂಪರ್ಕಿಸಿದರೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚು. ಖ್ಯಾತ ಹೃದ್ರೋಗ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದಿನ ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ ದೇಶದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ.
ವಯಸ್ಸಾದವರು ಮಾತ್ರವಲ್ಲದೆ ಯುವಕರಲ್ಲೂ ಇದು ಕಂಡುಬರುತ್ತಿದೆ. ಆದ್ದರಿಂದ ದೇಹ ನೀಡುವ ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸುವುದು ಅಗತ್ಯ.
ಎದೆಯಲ್ಲಿ ಅಸ್ವಸ್ಥತೆ ಮತ್ತು ಒತ್ತಡ.?
ಎದೆಯಲ್ಲಿ ಇದ್ದಕ್ಕಿದ್ದಂತೆ ವಿಪರೀತ ಅಸ್ವಸ್ಥತೆ, ಬಿಗಿತ ಅಥವಾ ಭಾರ ಅನುಭವವಾಗುತ್ತಿದ್ದರೆ ಅದನ್ನು ಸಾಮಾನ್ಯವೆಂದು ತಳ್ಳಿಹಾಕಬೇಡಿ.
ಎದೆಯಲ್ಲಿ ಉರಿ ಕಾಣಿಸಿಕೊಂಡು ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತಿದ್ದರೂ ಅದು ಹೃದಯ ಸಂಬಂಧಿ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ರೀತಿಯ ಅನುಭವ ಪದೇ ಪದೇ ಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಅತಿಯಾದ ಆಯಾಸ ಮತ್ತು ಸುಸ್ತು.?
ದೈನಂದಿನ ಸಾಮಾನ್ಯ ಕೆಲಸಗಳನ್ನು ಮಾಡುವಾಗಲೂ ತುಂಬಾ ಬೇಗನೆ ಸುಸ್ತಾಗುತ್ತಿದ್ದರೆ ಅಥವಾ ದೇಹವು ಸಹಕರಿಸುತ್ತಿಲ್ಲ ಎನಿಸಿದರೆ ಇದು ಹೃದಯದ ಎಚ್ಚರಿಕೆ ಸಂಕೇತವಾಗಿರಬಹುದು.
ವಿಶ್ರಾಂತಿ ಪಡೆದ ನಂತರವೂ ಆಯಾಸ ಕಡಿಮೆಯಾಗದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ.
ಕೈ, ಕುತ್ತಿಗೆ ಮತ್ತು ಭುಜಗಳಲ್ಲಿ ನೋವು.?
ಎರಡೂ ಕೈಗಳು, ಕುತ್ತಿಗೆ, ದವಡೆ, ಭುಜಗಳು ಅಥವಾ ಬೆನ್ನಿನ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಸಾಮಾನ್ಯ ನೋವು ಎಂದು ಭಾವಿಸುವುದು ತಪ್ಪು.
ಇದು ಹೃದಯಾಘಾತದ ‘ಸೈಲೆಂಟ್’ ಸಂಕೇತಗಳಲ್ಲಿ ಒಂದಾಗಿದೆ. ವಿಶೇಷವಾಗಿ ಎಡಗಡೆಯ ಕೈ ಅಥವಾ ಭುಜದಲ್ಲಿ ನೋವು ಹೆಚ್ಚಾಗಿ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.
ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು.?
ಸ್ವಲ್ಪ ದೂರ ನಡೆದರೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ, ಮಾತನಾಡುವಾಗ ಉಸಿರು ಕಟ್ಟಿದಂತಾಗುತ್ತಿದ್ದರೆ ಅಥವಾ ಮೆಟ್ಟಿಲು ಹತ್ತುವಾಗ ಅತಿಯಾಗಿ ಏದುಸಿರು ಬರುತ್ತಿದ್ದರೆ ಅದನ್ನು ಎಚ್ಚರಿಕೆಯೆಂದು ಪರಿಗಣಿಸಿ.
ಜೊತೆಗೆ ಯಾವುದೇ ಕಾರಣವಿಲ್ಲದೆ ತಣ್ಣನೆಯ ಬೆವರು ಬರುವುದು, ಹಸಿವಾಗದಿರುವುದು, ತಲೆತಿರುಗುವಿಕೆ ಅಥವಾ ವಾಕರಿಕೆ ಅನುಭವವಾಗುವುದು ಕೂಡ ಹೃದಯದ ತೊಂದರೆಯನ್ನು ಸೂಚಿಸಬಹುದು.
ರಾತ್ರಿಯ ಸಮಯದಲ್ಲಿ ಪದೇ ಪದೇ ನಿದ್ದೆ ಕೆಡುವುದು ಅಥವಾ ನಿದ್ದೆ ಬರದಿರುವುದು ಕೂಡ ಒಂದು ಲಕ್ಷಣವಾಗಿರಬಹುದು. ತಿಂಗಳಲ್ಲಿ ಹಲವು ಬಾರಿ ಹೀಗಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಯಾರಿಗೆ ಅಪಾಯ ಹೆಚ್ಚು.?
ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿರುವವರು, ಧೂಮಪಾನ ಮಾಡುವವರು ಮತ್ತು ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇರುವವರಿಗೆ ಅಪಾಯ ಹೆಚ್ಚು.
40 ವರ್ಷ ದಾಟಿದ ಮೇಲೆ ನಿಯಮಿತ ದೈಹಿಕ ವ್ಯಾಯಾಮ ಮಾಡದವರಲ್ಲೂ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಹೃದ್ರೋಗ ತಜ್ಞರನ್ನು ಸಂಪರ್ಕಿಸಿ. ಇಸಿಜಿ, ರಕ್ತ ಪರೀಕ್ಷೆ ಮತ್ತು ಇತರ ಪರೀಕ್ಷೆಗಳ ಮೂಲಕ ಸಮಸ್ಯೆಯನ್ನು ಬೇಗ ಗುರುತಿಸಬಹುದು.
ಜೀವನಶೈಲಿ ಬದಲಾವಣೆ (Lifestyle change), ಆರೋಗ್ಯಕರ ಆಹಾರ (Healthy food), ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣದಿಂದ ((by pressure control) ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.
ದೇಹ ನೀಡುವ ಈ ಸಂಕೇತಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುವುದು ಜೀವ ಉಳಿಸುವುದು.
ಯಾವುದೇ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸದೆ ವೈದ್ಯರ ಸಲಹೆ ಪಡೆಯಿರಿ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.